ಒಳ್ಳೆಯ ಹೆಂಡತಿ ತನ್ನ ಗಂಡನಿಗೆ ತನ್ನ ಜೀವಮಾನವೆಲ್ಲಾ ಒಳ್ಳೆಯದನ್ನು ಮಾಡುವಳು. ಆಕೆ ಅವನಿಗೆಂದಿಗೂ ತೊಂದರೆ ಮಾಡುವುದಿಲ್ಲ. ಅವಳು ಬಟ್ಟೆ ತಯಾರಿಸಲು ಉಣ್ಣೆಯನ್ನು ಮತ್ತು ಸೆಣಬಿನ ನಾರನ್ನು ಯಾವಾಗಲೂ ಶೇಖರಿಸುವಳು. ವ್ಯಾಪಾರದ ಹಡಗುಗಳಂತೆ ದೂರದಿಂದ ಬೇಕಾದ ಆಹಾರವನ್ನು ಸಂತೋಷದಿಂದ ಮನೆಗೆ ತರುವಳು. ಇನ್ನೂ ಕತ್ತಲಿರುವಾಗಲೇ ಆಕೆ ಎದ್ದೇಳುವಳು. ಆಕೆ ತನ್ನ ಕುಟುಂಬದವರಿಗೂ ತನ್ನ ಸೇವಕಿಯರಿಗೂ ಊಟ ಕೊಡುವಳು. ಆಕೆ ಜಮೀನನ್ನು ಕೊಂಡುಕೊಳ್ಳುವಳು; ತಾನು ಗಳಿಸಿದ ಹಣವನ್ನು ದ್ರಾಕ್ಷಿತೋಟಕ್ಕೆ ಉಪಯೋಗಿಸುವಳು. ಆಕೆ ತುಂಬ ಕಷ್ಟಪಟ್ಟು ಕೆಲಸಮಾಡುವಳು. ಆಕೆ ಬಲವಾಗಿದ್ದಾಳೆ; ತನ್ನ ಕೆಲಸಗಳನ್ನೆಲ್ಲಾ ಮಾಡಲು ಶಕ್ತಳಾಗಿದ್ದಾಳೆ. ಆಕೆ ತಾನು ತಯಾರಿಸಿದ ವಸ್ತುಗಳನ್ನು ಒಳ್ಳೆಯ ಲಾಭಕ್ಕೆ ಮಾರುವಳು. ರಾತ್ರಿ ಬಹುಹೊತ್ತಿನವರೆಗೂ ಆಕೆ ಕೆಲಸ ಮಾಡುವಳು. ಆಕೆ ತಾನೇ ದಾರವನ್ನು ತಯಾರಿಸುವಳು; ತಾನೇ ಬಟ್ಟೆಯನ್ನು ನೇಯುವಳು. ಆಕೆ ಯಾವಾಗಲೂ ಬಡವರಿಗೆ ಕೊಡುವಳು; ಕೊರತೆಯಲ್ಲಿರುವ ಜನರಿಗೆ ಸಹಾಯ ಮಾಡುವಳು. ಹಿಮ ಸುರಿಯುವಾಗ, ಆಕೆ ತನ್ನ ಕುಟುಂಬದ ಬಗ್ಗೆ ಚಿಂತಿಸಬೇಕಿಲ್ಲ; ಆಕೆ ಅವರೆಲ್ಲರಿಗೆ ಬೆಚ್ಚಗಿರುವ ಬಟ್ಟೆಗಳನ್ನು ಕೊಟ್ಟಿದ್ದಾಳೆ. ಆಕೆ ಹೊದಿಕೆಗಳನ್ನು ತಯಾರಿಸುವಳು. ಆಕೆಯು ಶ್ರೇಷ್ಠವಾದ ನಾರಗಸೆಯ ದಾರದಿಂದ ಮಾಡಿದ ಬಟ್ಟೆಗಳನ್ನು ಧರಿಸಿಕೊಳ್ಳುವಳು. ಜನರು ಆಕೆಯ ಗಂಡನನ್ನು ಗೌರವಿಸುವರು. ಅವನು ದೇಶದ ಹಿರಿಯರುಗಳಲ್ಲಿ ಒಬ್ಬನಾಗಿರುವನು. ಆಕೆ ಒಳ್ಳೆಯ ವ್ಯಾಪಾರ ಮಾಡುವಳು; ಉಡುಪುಗಳನ್ನೂ ನಡುಪಟ್ಟಿಗಳನ್ನೂ ತಯಾರಿಸಿ ಮಾರುವಳು. ಆಕೆಯು ಶಕ್ತಿಯನ್ನೂ ಗಾಂಭೀರ್ಯವನ್ನೂ ಪ್ರದರ್ಶಿಸುವಳು; ಹರ್ಷದಿಂದ ಭವಿಷ್ಯತ್ತನ್ನು ಎದುರುನೋಡುವಳು. ಆಕೆಯು ಜ್ಞಾನದಿಂದ ಮಾತಾಡುವಳು; ಪ್ರೀತಿಯಿಂದ ಸದುಪದೇಶ ಮಾಡುವಳು. ಆಕೆಯು ಚಟುವಟಿಕೆಯಿಂದಿದ್ದು ಗೃಹಕಾರ್ಯಗಳನ್ನೆಲ್ಲಾ ನೋಡಿಕೊಳ್ಳುವಳು. ಮಕ್ಕಳು ಎದ್ದುನಿಂತು ಆಕೆಯನ್ನು ಅಭಿನಂದಿಸುವರು. ಗಂಡನು ಅವಳನ್ನು ಹೊಗಳುವನು. “ಅನೇಕ ಹೆಂಗಸರು ಮೆಚ್ಚಿಕೆಗೆ ಪಾತ್ರವಾದ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ನೀನು ಅವರೆಲ್ಲರಿಗಿಂತಲೂ ಅತ್ಯುತ್ತಮಳುಎಂದು ಆಕೆಯ ಗಂಡನು ಹೊಗಳುವನು. ಲಾವಣ್ಯ ನಿನ್ನನ್ನು ಮೋಸಗೊಳಿಸಬಲ್ಲದು; ಸೌಂದರ್ಯ ತಾತ್ಕಾಲಿಕವಾದದ್ದು. ಆದರೆ ಯೆಹೋವನಲ್ಲಿ ಭಯಭಕ್ತಿಯುಳ್ಳ ಹೆಂಗಸೇ, ಹೊಗಳಿಕೆಗೆ ಪಾತ್ರಳು. ಆಕೆ ತನಗೆ ಯೋಗ್ಯವಾದ ಪ್ರತಿಫಲವನ್ನು ಹೊಂದಬೇಕು. ಆಕೆಯ ಕಾರ್ಯಗಳಿಗಾಗಿ ಜನರೆಲ್ಲರೂ ಆಕೆಯನ್ನು ಬಹಿರಂಗವಾಗಿ ಸನ್ಮಾನಿಸಬೇಕು.-- ಸತ್ಯವೇದ -- ಙ್ಞಾನೋಕ್ತಿಗಳು.31:12ರಿಂದ31

Comments